Share

ಬೆಂಗಳೂರು: ಸಾಮಾನ್ಯವಾಗಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರಿಗೆ ಅಭಿಮಾನಿಗಳು ಸಾಕಷ್ಟು ಉಡುಗೊರೆ ನೀಡುತ್ತಿರುತ್ತಾರೆ. ಇದೀಗ ನಟ ಚಿರಂಜೀವಿ ಸರ್ಜಾ ಮತ್ತು ಅವರ ಪತ್ನಿ ಮೇಘನಾ ರಾಜ್ ಒಂದು ವಿಶೇಷ ಗಿಫ್ಟ್ ನೀಡಿದ್ದಾರೆ.

ದರ್ಶನ್ ಅವರು ಚಿರಂಜೀವಿ ಸರ್ಜಾ ಮತ್ತು ಅವರ ಪತ್ನಿ ಮೇಘನಾ ಅವರ ಅನೇಕ ಸಿನಿಮಾಗಳಿಗೆ ಸಾಥ್ ನೀಡಿದ್ದಾರೆ. ದರ್ಶನ್ ಅವರಿಗೆ ಪ್ರಾಣಿಗಳು ಅಂದರೆ ತುಂಬ ಇಷ್ಟ. ಈ ಹಿನ್ನೆಲೆಯಲ್ಲಿ ಈ ಜೋಡಿ ದರ್ಶನ್ ಅವರಿಗೆ ನಾಯಿಮರಿಯನ್ನು ಉಡುಗೊರೆಯಾಗಿ ನೀಡಿದ್ದಾರೆ.

ಚಿರು ದಂಪತಿ ತಮ್ಮ ಮನೆಯ ಬೀಮಾ ಎಂಬ ನಾಯಿಯ ಮಗನನ್ನು ದರ್ಶನ್ ಅವರಿಗೆ ಉಡುಗೊರೆಯಾಗಿ ನೀಡಿದ್ದಾರೆ. ಈ ಬಗ್ಗೆ ಮೇಘನಾ ರಾಜ್ ಅವರು ತಮ್ಮ ಇನ್‍ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದಾರೆ. “ನಟ ದರ್ಶನ್ ಸರ್ ನಮ್ಮ ಕುಟುಂಬ ವಿಶೇಷ ಸದಸ್ಯರಾಗಿದ್ದಾರೆ. ಅವರ ಪ್ರೋತ್ಸಾಹಕ್ಕೆ ನಮ್ಮದೊಂದು ಚಿಕ್ಕ ಉಡುಗೊರೆ ಇದು” ಎಂದು ಬರೆದುಕೊಂಡಿದ್ದಾರೆ.

ದರ್ಶನ್ ಅವರಿಗೆ ಚಿರು ನಾಯಿಮರಿಯನ್ನು ನೀಡುವಾಗ ಫೋಟೋ ಕ್ಲಿಕ್ಕಿಸಿಕೊಂಡಿದ್ದು, ಆ ಫೋಟೋವನ್ನು ಮೇಘನಾ ಅವರು ಶೇರ್ ಮಾಡಿಕೊಂಡಿದ್ದಾರೆ. ದರ್ಶನ್ ನಟನೆಯ ‘ಕುರುಕ್ಷೇತ್ರ’ ಸಿನಿಮಾದಲ್ಲಿ ಮೇಘನಾ ರಾಜ್ ಕೂಡ ಅಭಿನಯಸಿದ್ದಾರೆ.

ಇತ್ತೀಚೆಗಷ್ಟೇ ಚಿರಂಜೀವಿ ಸರ್ಜಾ ಅಭಿನಯದ ‘ಸಿಂಗ’ ಸಿನಿಮಾದ ‘ಶಾನೆ ಟಾಪಾಗವ್ಳೆ ನಮ್ಮುಡುಗಿ..’ ಹಾಡನ್ನು ನಟ ದರ್ಶನ್ ಬಿಡುಗಡೆ ಮಾಡಿದ್ದರು. ಈ ವೇಳೆ ಮಾತನಾಡಿ, ಈ ಹಾಡು ನನಗೆ ತುಂಬಾ ಇಷ್ಟವಾಗಿದೆ ಎಂದು ಹೇಳಿದ್ದರು.

Comments

Share