Share

ಒಂದು ಕಡೆ ಜನಸಾಮಾನ್ಯರು ಪ್ರವಾಹಕ್ಕೆ ಸಿಲುಕಿ ನಲುಗುತ್ತಿದ್ದಾರೆ. ಮತ್ತೊಂದು ಕಡೆ ರಾಜಕೀಯ ನಾಯಕರು ಫೋನ್ ಟ್ಯಾಪಿಂಗ್ ದಾಳಕ್ಕೆ ಬಿದ್ದು ಗರಬಡಿದಂತಾಗಿದ್ದಾರೆ. ರಾಜಕೀಯ ನಾಯಕರ ಮೇಲಿನ ಟೆಲಿಫೋನ್ ಕದ್ದಾಲಿಕೆ ಪ್ರಕರಣ ಇದೀಗ ಗಂಭೀರ ಸ್ವರೂಪ ಪಡೆದುಕೊಳ್ಳುತ್ತಿದೆ.

ರಾಜ್ಯ ರಾಜಕಾರಣದಲ್ಲಿ ಗದ್ದಲವೆಬ್ಬಿಸಿದ ಟೆಲಿಫೋನ್ ಕದ್ದಾಲಿಕೆ
ಮಾಜಿ ಸಿಎಂ ಕುಮಾರಸ್ವಾಮಿ ಬುಡಕ್ಕೆ ಬಂದು ನಿಂತಿದೆ ಟ್ಯಾಪಿಂಗ್ ಉರುಳು. ಟೆಲಿಫೋನ್ ಕದ್ದಾಲಿಕೆ ಪ್ರಕರಣ ರಾಜ್ಯ ರಾಜಕಾರಣದಲ್ಲಿ ಅಲ್ಲೋಲಕಲ್ಲೋಲಕ್ಕೆ ಕಾರಣವಾಗಿದೆ. ಹಿಂದಿನ ಮೈತ್ರಿ ಸರ್ಕಾರದ ಅವಧಿಯಲ್ಲಿ ನಡೆದಿದೆ ಎನ್ನಲಾದ ದೂರವಾಣಿ ಕದ್ದಾಲಿಕೆ ವಿಚಾರ ಮಾಜಿ ಸಿಎಂ ಕುಮಾರಸ್ವಾಮಿ ಉರುಳಾಗುವ ಸಾಧ್ಯತೆಯಿದೆ.

ಮೈತ್ರಿ ಸರ್ಕಾರದ ಅವಧಿಯಲ್ಲಿ ಆಪರೇಷನ್ ಕಮಲದಿಂದ ಸರ್ಕಾರ ಉಳಿಸಿಕೊಳ್ಳೋಕೆ ಹೆಚ್ಡಿಕೆ ಪೊಲೀಸ್ ಅಧಿಕಾರಿಗಳ ಮೂಲಕ ನಮ್ಮ ಫೋನ್ ಟ್ಯಾಪಿಂಗ್ ಮಾಡಿಸಿದ್ದಾರೆಂಬ ಆರೋಪವನ್ನ ಬಿಜೆಪಿ ನಾಯಕರು ಹೊರಿಸಿದ್ದಾರೆ. ಬೆಂಗಳೂರು ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಅವರ ಆಡಿಯೋ ಪ್ರಕರಣದ ನಂತರ ಈ ಟ್ಯಾಪಿಂಗ್ ಆರೋಪಕ್ಕೆ ಮತ್ತಷ್ಟು ಬಲಬಂದಿದೆ. ಈಗಾಗಲೇ ಡಿಜಿಯವರಿಗೆ ಸಲ್ಲಿಸಿರುವ ಸಿಸಿಬಿ ಜಂಟಿ ಆಯುಕ್ತ ಸಂದೀಪ್ ಪಾಟೀಲರ ಪ್ರಾಥಮಿಕ ವರದಿಯಲ್ಲೂ ಟ್ಯಾಪಿಂಗ್ ಮಾಡಿರುವ ಬಗ್ಗೆ ಉಲ್ಲೇಖಿಸಲಾಗಿದೆ. ಅಲ್ಲದೆ ಹಿಂದಿನ ಪೊಲೀಸ್ ಆಯುಕ್ತರ ಸೂಚನೆಯಂತೆ ಕೆಲವರ ಟೆಲಿಫೋನ್ ಸಂಭಾಷಣೆಯನ್ನ ಕದ್ದಿರುವುದಾಗಿ ಇನ್ಸ್ ಪೆಕ್ಟರ್ ಮಿರ್ಜಾ ತಪ್ಪೊಪ್ಪಿಕೊಂಡಿದ್ದಾರೆ.

ಹೀಗಾಗಿ ಹಿಂದಿನ ಪೊಲೀಸ್ ಆಯುಕ್ತ ಅಲೋಕ್ ಕುಮಾರ್ ಹಾಗೂ ಆಗಸಿಎಂ ಆಗಿದ್ದ ಕುಮಾರಸ್ವಾಮಿಗೆ ಇದೀಗ ಸಂಕಷ್ಟ ಎದುರಾಗಿದೆ. ಒಂದು ವೇಳೆ ಈ ಪ್ರಕರಣದ ಬಗ್ಗೆ ಸಿಎಂ ಬಿಎಸ್ ವೈ ವಿಶೇಷ ತನಿಖಾ ತಂಡವನ್ನ ರಚಿಸಲು ಮುಂದಾಗಿದ್ದು,ಇದು ಮಾಜಿ ಹೆಚ್ಡಿಕೆ ರಾಜಕೀಯ ಭವಿಷ್ಯಕ್ಕೇ ಮಾರಕವಾಗಲಿದೆ.

ಯಾರ್ಯಾರ ಫೋನ್ ಕದ್ದಾಲಿಕೆ ಮಾಡಲಾಗಿದೆ..?
ಇನ್ನು ಆಪರೇಷನ್ ಕಮಲದ ವೇಳೆ ಅತೃಪ್ತ ಶಾಸಕರನ್ನ ಯಾವ ಬಿಜೆಪಿ ನಾಯಕರು ಸೆಳೆಯುತ್ತಿದ್ದಾರೆಂಬ ಮೇಲೆ ಅವರ ನಂಬರ್ ಕ್ಯಾಪ್ಚರ್ ಮಾಡಲಾಗಿದೆಯಂತೆ. ಬಿಜೆಪಿ ನಾಯಕರಾದ ಆರ್.ಅಶೋಕ್, ಎಸ್.ಆರ್.ವಿಶ್ವನಾಥ್, ಮಲ್ಲೇಶ್ವರಂ ಅಶ್ವಥ್ ನಾರಾಯಣ್, ಮುಂಬೈಗೆ ತೆರಳಿದ್ದ ಅತೃಪ್ತ ಶಾಸಕರಾದ ವಿಶ್ವನಾಥ್, ಸೋಮಶೇಖರ್, ಭೈರತಿ ಬಸವರಾಜು, ಎಂಟಿಬಿ ನಾಗರಾಜು ಹಾಗೂ ಕೆಲ ಪತ್ರಕರ್ತರ ಫೋನ್ ಕೂಡ ಟ್ಯಾಪ್ ಮಾಡಲಾಗಿತ್ತಂತೆ.

ಇದು ಹೋಗ್ಲಿ ಅಂದ್ರೆ ಮೈತ್ರಿ ಪಕ್ಷದ ನಾಯಕರಾದ ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಅವರ ಆಪ್ತ ಸಹಾಯಕರ ಫೋನ್ ಕೂಡ ಕದ್ದಾಲಿಸಿದ್ದು ಸಾಕಷ್ಟು ಕುತೂಹಲ ಕೆರಳಿಸಿದೆ. ಒಟ್ಟು 300ಕ್ಕೂ ಹೆಚ್ಚು ಜನರ ಫೋನ್ ಕದ್ದಾಲಿಸಲಾಗಿದೆ ಅನ್ನೋ ಆರೋಪ ಇದೀವ ಎದುರಾಗಿದೆ.

Comments

Share